ನುಲಿತ
ಅನೇಕ ಸಾಕುಪ್ರಾಣಿಗಳ ಉದರಬೇನೆ (ಕಾಲಿಕ್). ಸಾಮಾನ್ಯವಾಗಿ ಅನ್ನನಾಳದಲ್ಲಿ ಉಂಟಾಗುವ ಅಡಚಣೆಯಿಂದ ಕರುಳಿನ ಭಾಗದಲ್ಲಿ ಕಾಣಿಸಿಕೊಳ್ಳುವ ನುಲಿತವೇ ನಿಜವಾದದ್ದು. ಕೆಲವೊಮ್ಮೆ ದೇಹದ ಇತರ ಅಂಗಾಂಗಳಾದ ಗರ್ಭಕೋಶ, ಮೂತ್ರಕೋಶ ಹಾಗೂ ಮೂತ್ರಜನಕಾಂಗಗಳಲ್ಲಿ ಮೂಡುವ ಅಡಚಣೆಯಿಂದಲೂ ಇದೇ ರೀತಿಯ ನೋವು ಕಾಣಿಸಿಕೊಳ್ಳಬಹುದು. ಆದರೆ ಅದು ಅಬದ್ಧ ರೀತಿಯ ನುಲಿತ.

	ನುಲಿತ ಎಲ್ಲ ತೆರನ ಪ್ರಾಣಿಗಳನ್ನು ಪೀಡಿಸಬಹುದಾದರೂ ಕುದುರೆಯಲ್ಲಿ ಹೆಚ್ಚು. ಅಜೀರ್ಣ ರೋಗದಿಂದ ಆರಂಭವಾಗುವ ಈ ವ್ಯಾಧಿ ತೀಕ್ಷ್ಣರೂಪವನ್ನು ತಾಳುತ್ತದೆ. ಕುದುರೆಯ ದೇಹದಲ್ಲಿ ನುಲಿತ ಅನೇಕ ಕಾರಣಗಳಿಂದ ವಿವಿಧ ರೂಪಗಳಲ್ಲಿ ಮೂಡಿಬರುವುದು. ಸ್ನಾಯು ಸಂಕೋಚನದಿಂದ ಉಂಟಾಗುವುದನ್ನು ಸೆಳವಿನ ನುಲಿತವೆಂದೂ (ಸ್ಪ್ಯಾಸ್ಮಾಡಿಕ್ ಕಾಲಿಕ್) ವಾಯು ಶೇಖರಣೆ ಹಾಗೂ ಆಹಾರ ಪರಿಚಲನ ಸ್ತಂಭನದಿಂದ ವಾಯುನುಲಿತವೆಂದೂ (ಇಂಫ್ರ್ಯಾಕ್ಷನ್ ಕಾಲಿಕ್) ಕರೆಯಲಾಗುತ್ತದೆ.

	ದೊಡ್ಡ ಕರುಳಿನ ಸ್ತಂಭನದಿಂದ ಉಂಟಾಗುವ ನುಲಿತವೇ ಹೆಚ್ಚು ಸಾಮಾನ್ಯ. ಹಸಿವಾದಾಗ ಆತುರದಿಂದ ತಿನ್ನುವುದರಿಂದ ಉಂಟಾಗಬಹುದಾದ ಅಜೀರ್ಣದ ತೊಂದರೆಯಿಂದ ಬರುವ ನುಲಿತ ಅಷ್ಟು ಸಾಮಾನ್ಯವಾದುದಲ್ಲ. ಅಂಗಾಂಗಗಳ ಸ್ಥಾನಚ್ಯುತಿಯಿಂದ ಕರುಳು ಸುರುಳಿ ಸುತ್ತಿಕೊಳ್ಳುವುದಲ್ಲದೆ, ಕರುಳಿನ ಒಂದು ಭಾಗ ಉದರ ಪರಿವೇಷ್ಟನ ಪಟಲದೊಳಗೆ (ಪೆರಿಟೋನಿಯಮ್) ಬಂಧಿತವಾಗುವುದು ತೀರಸಾಮಾನ್ಯ.

	ಪ್ರಾಣಿಗಳು ಮಿತಿಮೀರಿ ತಿನ್ನುವುದು, ಸರಿಯಾಗಿ ಅಗಿಯದಿರುವುದು, ಹೆಚ್ಚಿನ ನೀರು ಕುಡಿಯುವುದು, ಹಾಳಾದ ಅಥವಾ ತಣ್ಣಗಾದ ಆಹಾರವನ್ನು ತಿನ್ನುವುದು, ಹೊಸ ಕಾಳುಗಳನ್ನು ಅಥವಾ ಸಾಕಷ್ಟು ನೀರಿಲ್ಲದೆ ಉಪ್ಪನ್ನು ಮುಕ್ಕುವುದು, ಅತಿಯಾದ ವ್ಯಾಯಾಮಕ್ಕೆ ತೊಡಗುವುದು ಹಾಗೂ ಪರೋಪಜೀವಿಗಳಿಂದ ಮೆಸೆಂಟರಿಕ್ ನಾಳಗಳಲ್ಲಿ ಉಂಟಾಗುವ ಅಪಧಮನೀಯ ಊದು (ಆನ್ಯೂರಿಸಮ್)-ಇವು ಸಹ ನುಲಿತಕ್ಕೆ ಕಾರಣಗಳಾಗಿವೆ.

	ರೋಗನಿದಾನದಲ್ಲಿ ಮೊದಲು ಆಹಾರನೀಡಿಕೆ, ಪ್ರಾಣಿಯ ಚಟುವಟಿಕೆ ಮತ್ತು ಅನೇಕ ಅಂಗಾಂಗಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ, ಗುದದ್ವಾರದ ಮೂಲಕ ಕರುಳಿನ ಒಳಹುರುಳನ್ನು ಪರೀಕ್ಷೆ ಮಾಡಿ, ಕರುಳಿನ ಸ್ಥಾನಪಲ್ಲಟವನ್ನು ಗೊತ್ತುಪಡಿಸಲಾಗುತ್ತದೆ. ಆಹಾರ ಪರಿಚಲನಸ್ತಂಬನವನ್ನು ಹುಡುಕುವುದು, ಕರುಳಿನ ಛಿದ್ರತೆಯಿಂದ ಉದರದ ಪರಿವೇಷ್ಟನ ಪಟಲದಲ್ಲಿ ಕರುಳಿನ ಹುರುಳು ಕಾಣಿಸಿಕೊಳ್ಳುವುದು-ಇವು ಇತರ ಮಾರ್ಗಗಳು.

	ಪ್ರಾಣಿ ಮುಲುಕುವುದು, ಅಸ್ಪಷ್ಟ ಧ್ವನಿ ಮಾಡುವುದು, ನರಳುವುದು, ತಿಣುಕುವುದು, ಬೆವರುವುದು, ಹೊರಳಾಡುವುದು ಉದರ ಭಾಗದೆಡೆಗೆ ಹಾಗೂ ಹಿಂದಕ್ಕೆ ಕಾಲನ್ನೆತ್ತಿ ಸೆಟೆಯುವುದು, ಮೇಲಾಗಿ ಕುತೂಹಲಭರಿತ ನೋಟದಿಂದ ನೋಡುವುದು ಇವು ಬೇನೆಯ ಕೆಲವು ಚಿಹ್ನೆಗಳು. ಕಾಲಕಾಲಕ್ಕೆ ಹೊಮ್ಮಿ ಬರುವ ಬೇನೆಯಿಂದ ಪ್ರಾಣಿ ಬಹಳವಾಗಿ ನರಳುವುದು, ವಾಯು ಶೇಖರಣೆಯಿಂದ ನರಳಿಗೆ ಇಮ್ಮಡಿಯಾಗುವುದು, ದೇಹಾಂಗದ ನಯಚರ್ಮ ಹಳದಿರೂಪವಾಗಿ, ಮಲಿನ ರಕ್ತನಾಳಗಳು ಉಬ್ಬಿದಂತಾಗುವುದು.

	ನುಲಿತದಿಂದ ನರಳುವ ಪ್ರಾಣಿ ತನ್ನ ದೇಹದ ಅಂಗಾಂಗಗಳ ಅಪಘಾತವನ್ನು ಉಂಟು ಮಾಡಿಕೊಳ್ಳುವ ಸಂಭವವಿರುವುದರಿಂದ ಮೊದಲು ಅದನ್ನು ಹತೋಟಿಯಲ್ಲಿಟ್ಟು ಮುಂದಿನ ಚಿಕಿತ್ಸಾಕ್ರಮ ಕೈಗೊಳ್ಳಲಾಗುತ್ತದೆ. ಉದರಬೇನೆಯ ನೋವನ್ನು ನೀಗುವ ಹಾಗೂ ಕರುಳಿನ ವಾಯು ಉತ್ಪಾದನೆಯನ್ನು ಸ್ಥಗಿತಮಾಡುವ ಔಷಧಿಗಳನ್ನು ಉಪಯೋಗಿಸಿ, ಕರುಳಿನ ಉರುಳನ್ನು ತೆಗೆದು ಪ್ರಾಣಿಯನ್ನು ಶಾಂತಪರಿಸರಕ್ಕೆ ಸಾಗಿಸಿದರೆ ಬೇನೆಯನ್ನು ನಿವಾರಿಸಬಹುದು. 
(ಜಿ.ಆರ್.ಆರ್.ಎಸ್; ಡಿ.ಆರ್‍ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ